ಸಂಗೀತ ಸಂಜೆ ಕಾರ್ಯಕ್ರಮವು ಪ್ರಾರಂಭವಾದುದರ ಬಗ್ಗೆ ಒಂದು ತುಣುಕು - ಇದು ನಿಮಗೆ ತಿಳಿದಿರಲಿ ಎಂದು
ನಾಲ್ಕನೆಯ ಪದಾಧಿಕಾರಿಗಳಾಗಿ ರಿಚ್ಮಂಡ್ ಕನ್ನಡ ಸಂಘದ ಅಧ್ಯಕ್ಷರಾಗಿ ಶ್ರೀ.ಶ್ರೀನಾಥ್ ಭಲ್ಲೆ ಮತ್ತು ಕಾರ್ಯದರ್ಶಿಯಾಗಿ ಶ್ರೀ. ರವಿ ಬೋರೇಗೌಡ
ಅವರುಗಳು ಕನ್ನಡದ ಸೇವೆಯನ್ನು ಮುನ್ನೆಡೆಸಲು ಅಧಿಕಾರವಹಿಸಿಕೊಂಡಿದ್ದು ೨೦೦೬ನೆಯ ದೀಪಾವಳಿಯ ಕಾರ್ಯಕ್ರಮದಲ್ಲಿ.
ಆ ನಂತರ ೨೦೦೭ ಮತ್ತು ೨೦೦೮ರ ಎರಡು ವರ್ಷಗಳ ಅವಧಿಯನ್ನು ಕೈಗೆತ್ತಿಕೊಂಡವರ ಮನದಲ್ಲಿ ಏನಾದಾರೂ ಹೊರತಾಗಿ ಆರಂಭಿಸಬೇಕು ಎಂಬುದು.
ಸಂಗೀತದ ಬಗ್ಗೆ ಇದ್ದ ಒಲುವು, ಒಂದು ಅನಿಸಿಕೆಗೆ ಮೂಲವಾಯ್ತು. ಇಬ್ಬರ ಕನಸಿನ ಕೂಸಾಗಿ ಆರಂಭವಾಗಿದ್ದೇ "ಸಂಗೀತ ಸಂಜೆ" ಎಂಬ ಹಾಡುಗಾರಿಕೆಯ ಸವಿಸಂಜೆ.
ಫೆಬ್ರವರಿ ೨೦೦೭ ಸಮಯದಲ್ಲಿ ಪ್ರಥಮವಾಗಿ ಸಂಗೀತ ಸಂಜೆ ಕಾರ್ಯಕ್ರಮವು ಅಧಿಕೃತವಾಗಿ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೇ ಬಂದಿರುವ ಈ ಸುಂದರ ಕಾರ್ಯಕ್ರಮಕ್ಕೆ ಇಂದು ಹದಿನೆಂಟರ ಹರೆಯ.
ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ, ಅವರಲ್ಲಿರುವ ಪ್ರತಿಭೆಗಳನ್ನು ಹೊರತರುವ, ಅವರ ಆಸಕ್ತಿಯನ್ನು ಪ್ರೋತ್ಸಾಹಿಸುವ, ಪರೋಕ್ಷವಾಗಿ ಕನ್ನಡವನ್ನು ಬೆಳೆಸುವ ಈ 'ಸಂಗೀತ ಸಂಜೆ'ಯು ಅಗಾಧವಾಗಿ ಬೆಳೆದಿದೆ.
ಪ್ರತೀ ವರ್ಷವೂ ಈ ಒಂದು ಕಾರ್ಯಕ್ರಮಕ್ಕೆ ಎದುರು ನೋಡುವಂತೆ ಬೆಳೆದಿದೆ. ಅನೇಕಾನೇಕ ಮೊದಲಿಗರನ್ನು ಬೆಳೆಸಿದೆ. ಒಂದು ಉತ್ತಮ ವೇದಿಕೆಯಾಗಿ ರೂಪಗೊಂಡು 'ಅಕ್ಕ'ದಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆಯುವಂತೆ ಗಾಯಕ/ಗಾಯಕಿಯರನ್ನು ಬೆಳೆಸಿದೆ.
ಸಂಗೀತ ಸಂಜೆ ಪಯಣ, ಒಂದು ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಬೆಳೆವಣಿಗೆಯ ಪ್ರತೀ ಹಂತದಲ್ಲೂ ತನ್ನದೇ ಆದ ಸವಾಲುಗಳನ್ನು ಎದುರಿಸಿ ಗೆದ್ದು ನಿಂತಿದೆ, ಬೆಳೆದು ಬಂದಿದೆ. ಯಶಸ್ಸು ಎನ್ನುವುದು ಗಮ್ಯವಲ್ಲ ಬದಲಿಗೆ ಪಯಣ ಎಂಬುದಕ್ಕೆ ಉತ್ತಮ ನಿದರ್ಶನ ನಮ್ಮ ಸಂಗೀತ ಸಂಜೆ.
ಅಂದಿನ, ಇಂದಿನ ಮತ್ತು ಮುಂಬರುವ ಸಕಲ ಗಾಯಕ, ಗಾಯಕಿಯರಿಗೂ, ಅವರನ್ನು ಪ್ರೋತ್ಸಾಹಿಸಿ ಬೆಳೆಸಿದ್ದ ಮತ್ತು ಬೆಳೆಸುತ್ತಿರುವ ಸಕಲ ಬೆಂಬಲಿಗರಿಗೂ ಅಭಿನಂದನೆಗಳು. ಸಕಲರಿಗೂ ಶುಭವಾಗಲಿ.